ಬೆಸ್ನೆಗರ್
ಭಾರತದ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಒಂದು ಪ್ರಾಚೀನ ಸ್ಥಳ. ಇದು ವಿದಿಶಾ ನಗರಕ್ಕೆ ಸುಮಾರು 3 ಕಿಮೀ ದೂರದಲ್ಲಿ ಬೇತ್ವಾ ಮತ್ತು ಬೆಸ್ ನದಿಗಳ ನಡುವೆ ಇದೆ. ಪ್ರಾಚೀನ ಪಾಳಿ ಗ್ರಂಥಗಳಲ್ಲಿ ವೆಸ್ಸನಗರ ಎಂದು ಹೇಳಿದೆ. ರುಕ್ಮಾಂಗದ ರಾಜ ಇದನ್ನು ಸ್ಥಾಪಿಸಿದನೆಂಬುದು ಐತಿಹ್ಯ. ಕಾಬೂಲ್ ಕಣಿವೆಯಲ್ಲಿ ಆಳುತ್ತಿದ್ದ ಇಂಡೊ-ಗ್ರೀಕ್ ದೊರೆ ಆಂಟಿಯಾಲ್ಸಿಡಸನ ರಾಯಭಾರಿ ಹೀಲಿಯೊಡೋರಸ್ ಇಲ್ಲಿ ಶುಂಗವಂಶದ ದೊರೆಯಾದ ಭಾಗಭದ್ರನ (ಭಾಗವತ) ಆಳ್ವಿಕೆಯ 14ನೆಯ ವರ್ಷದಲ್ಲಿ ಶ್ರೀಕೃಷ್ಣನ ಗೌರವಾರ್ಥ ಗರುಡಗಂಬವೊಂದನ್ನು ನಿಲ್ಲಿಸಿದನೆಂದು ಈ ಸ್ಥಳದಲ್ಲಿ ದೊರೆತಿರುವ ಬ್ರಾಹ್ಮೀಲಿಪಿಯಲ್ಲಿರುವ ಪ್ರಾಕೃತಭಾಷೆಯ ಶಾಸನ ತಿಳಿಸುತ್ತದೆ. 

	ಪ್ರಾಚೀನ ಶಿಲಾಯುಗದಿಂದ ಹಿಡಿದು ಗುಪ್ತರ ಕಾಲದ ತನಕವೂ ಇದು ಪ್ರಮುಖ ಸ್ಥಳವಾಗಿತ್ತೆಂದೂ ವೈಷ್ಣವ, ಶೈವ, ಬೌದ್ಧ ಮತ್ತು ಜೈನಧರ್ಮಗಳ ನೆಲೆಯಾಗಿತ್ತೆಂದೂ-ಇಲ್ಲಿಯ ಉತ್ಖನನಗಳಿಂದ ತಿಳಿದುಬಂದಿವೆ. ಇಲ್ಲಿ ಮೌರ್ಯರ ಕಾಲಕ್ಕೆ ಸೇರಿದ ಒಂದು ಅಂಡಾಕಾರದ ದೇವಾಲಯವಿದ್ದುದರ ಗುರುತುಗಳು ದೊರಕಿವೆ. ಬೆಸ್ನೆಗರದ ಬೌದ್ಧಕಾಲೀನ ಸ್ತೂಪದಿಂದ ತೆಗೆಯಲಾಗಿರುವ ಕೆತ್ತನೆಯ ಕಲ್ಲುಗಳು ಕಲ್ಕತ್ತದ ವಸ್ತುಸಂಗ್ರಹಾಲಯದಲ್ಲಿವೆ. ಪ್ರಾಚೀನ ಕಾಲದಲ್ಲಿ ಈ ನಗರ ಉತ್ತರ ಭಾರತದ ಅನೇಕ ಪ್ರಮುಖ ನಗರಗಳೊಂದಿಗೆ ಸಂಬಂಧ ಹೊಂದಿತ್ತು. ಪಾಟಲೀಪುತ್ರ ಮತ್ತು ತಕ್ಷಶಿಲೆಯಿಂದ ದಕ್ಷಿಣ ಭಾರತಕ್ಕೆ ಹೋಗುವ ಅನೇಕ ರಾಜಮಾರ್ಗಗಳ ಕೂಡುಸ್ಥಳವಾಗಿತ್ತೆಂದು ತಿಳಿದುಬರುವುದು. 							
(ಸಿ.ಕೆಆರ್.; ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ